Grid View
List View
Reposts
 • mamatavikram 2w

  ಗೆರೆಗಳು

  ನೆನಪುಗಳ ಗೆರೆ ಎಳೆಯುತ್ತ
  ಎಳೆಯುತ್ತ ಕೂಡಿಸಿ ಗುಣಿಸಿ
  ಸುಂದರ ರಂಗೋಲಿ

  ಅಲ್ಲೊಂದು ಕೋನ
  ಇಲ್ಲೊಂದು ತ್ರಿಕೋನ
  ಗೆರೆಗಳು ಕೂಡಿಸಿದಾಗ ತಾನೇ?
  ಚೆಂದದ ಚಿತ್ತಾರ

  ಬೇಕು ಬೇಡಗಳ ಚಿಂತನೆಯಲ್ಲಿ
  ಮೌಢ್ಯ ಮೌಲ್ಯಗಳ ಗೆರೆಗಳಲ್ಲಿ
  ಸರಿ ತಪ್ಪುಗಳಲ್ಲೂ ಗೆರೆಗಳದೇ
  ಕಾರುಬಾರು (× ✓)

  ಬೀಜ ಮೊಳಕೆಯೊಡೆದು
  ತುಟಿ ಬಿಚ್ಚಿ ನಕ್ಕು ....
  ಮತ್ತೆ ಎತ್ತರಕ್ಕೆ ಬೆಳೆಯುವಾಗಲೂ
  ಗೆರೆಗಳದೇ ಹಾವಭಾವ...

  ಚಿತ್ರಿಸಿ ನೋಡಿ ಒಮ್ಮೆ..
  ಖಾಲಿ ಹಾಳೆಯಲ್ಲಿ ಇದ್ದೇ ಇರುವುದು
  ಗೆರೆಗಳು ಎಲ್ಲ ಕಡೆ..
  ವಾಸ್ತವಕ್ಕೇಕೆ ಬೇಕು ಕನ್ನಡಿ
  ©mamatavikram

 • mamatavikram 2w

  ಒಡಲಿನ ಪ್ರೀತಿ

  ಹೆಕ್ಕಿ ಹೆಕ್ಕಿ ಕಾಳುಗಳ
  ಮನತುಂಬಿ ಮನೆತುಂಬ
  ಎದೆಯಿಂದ ಎದೆಗೆ
  ಜೀವದುಸಿರು..

  ಮರದಲ್ಲೊಂದು ಗೂಡು
  ನೆಲದಲ್ಲೊಂದು ಸೂರು
  ಇದು ಮಾಡು (ಮನೆ) ಗೂಡುಗಳ ಕಥೆ
  ಒಡಲಿನ ಕುಡಿಗಳು
  ಗೊಂಚಲು ಹೂ ಕಾಯಿ ಹಣ್ಣಾಗಬೇಕು
  ಬೀಜ ಮತ್ತೆ ಬೇರಿಳಿಸಬೇಕು ನೆಲದೊಳಗೆ
  ಇದು ಒಡಲಿನ ಪ್ರೀತಿ ಮಮತೆಯ ನೀತಿ

  ಕಾಳು ಜತನ ಮಾಡುವುದು
  ಅನಿವಾರ್ಯವೂ ಅಲ್ಲ ಆಸೆಯೂ ಅಲ್ಲ
  ಇವು ತನ್ನವರಿಗಾಗಿ ...
  ಜೀವದೊಳಗಿನ ಪ್ರೀತಿ...
  ©mamatavikram

 • mamatavikram 2w

  ಖುಷಿ

  ಬಿಳಿ ಬೆಳ್ಳಿಮೋಡಗಳ
  ಜೊತೆ ಜೊತೆಗೆ ಸೂರ್ಯಪ್ರಭೆ
  ಸುತ್ತಲೂ ಹಸಿರು..
  ಝರಿ ತೊರೆ ಕಾನನವೇ
  ಕೇಳಿ ನನ್ನೊಳಗಿನ ಮಾತೊಂದು
  ಕೆಲವು ಚಿಂತನೆ ಹಲವು ಮಂಥನ
  ಏನಿಲ್ಲ ನನ್ನೊಳಗೆ..
  ಗುಂಪು ಗುಂಪಾದ ಹಕ್ಕಿಗಳಿಂಚರ
  ಬೆರೆತು ಕಚಗುಳಿಸುವ ತಂಗಾಳಿ
  ನಗುತ್ತ ಅರಳುವ ಹೂವುಗಳೇ
  ನಿಮ್ಮ ಕಂಡಾಗಲೆಲ್ಲ ನನ್ನೊಳಗೊಂದು
  ಬೆರಗು ಉತ್ಸಾಹ ಸಂಭ್ರಮ
  ನೋಡುತ್ತೇನೆ ಹಗಲು ರಾತ್ರಿ
  ಮರೆಯುತ್ತೇನೆ ರಾತ್ರಿ (ನಿದ್ರಿಸಿದಾಗ)
  ನೆನೆಯುತ್ತೇನೆ ಹಗಲು (ಸರ್ವ ಬಾಂಧವ್ಯ)
  ಸಂತೋಷ ಸಡಗರದ ಉತ್ಥಾನ
  ಮನಸಲ್ಲಿ ಏನಿಲ್ಲ ಎಲ್ಲವೂ ‌ಸತ್ಯ..
  ©mamatavikram

 • mamatavikram 5w

  ಹಸಿರು

  ಮೊಗ್ಗರಳಿ ಹೂವಾಗಿ
  ಹಸಿರಿನ ಒಲವಿಗೆ ಒಲಿದು
  ಹಾಲ್ಕಡಲು ಅಂಗಳ

  ಮುಂಗುರುಳು ಚೆಂದ
  ತಂಗಾಳಿಯ ಗಾನಕೆ
  ಶೃಂಗಾರ ಝಣಕು
  ಕಂಕಣ ರಿಂಗಣ

  ಅಂತರಂಗದ ಗೊಂಬೆ
  ಸಾಲು ದೀಪಗಳ ಮಾಲೆ
  ಹೃದಯದ ಬತ್ತಿ ಹೊಸೆದು
  ಶುದ್ಧ ಬೆಳಕಿನ ಮನಸ್ಸು ಮಂದಿರ..

  ತೇಲುವ ಮೋಡಕ್ಕೆ
  ನೀಲಿ ಪಟ್ಟವ ಕಟ್ಟಿ
  ಶಾಂತಿ ಜೀವನ ಸಿಂಚನ.
  ©mamatavikram

 • mamatavikram 6w

  ಅಂತರಂಗದ ಮಾತು

  ಅಂತರಂಗದ...
  ನೆನಪುಗಳ ಬಿಳಲುಗಳೆಷ್ಟೋ
  ಮನಸ್ಸಿನ ಜಗತ್ತು ತುಂಬುವ
  ಮಣ್ಣಿನ ಘಮ, ಚಿಗುರಿನ ಸೊಗಸು
  ಝರಿ ತೊರೆ ಹಸಿರಿನ ಸೊಗಡು
  ಬದುಕಿನ ಪ್ರೀತಿಯ ಬಾಂಧವ್ಯ

  ಪ್ರಾಮಾಣಿಕತೆಯ ತುಂಬು ದಿನಗಳ
  ಸ್ವಾರಸ್ಯಗಳ ವಿಷಧೀಕರಿಸುವ ದಾರಿಗಳು

  ಹಳೆಯದರೊಂದಿಗೆ ಹೊಸದು ಸೇರಿಸಿ
  ನವೀಕರಣ ಮನೆಬಾಗಿಲು ರಂಗೋಲಿ
  ಕನಸಿನ ಬಣ್ಣವ ಮಿಶ್ರಿಸಿ(ಮಿಶ್ರಣ)
  ಕಾಮನಬಿಲ್ಲಿನ ಒರೆ ಹಚ್ಚಿ..
  ರೇಖೆ ತ್ರಿಕೋನಗಳ ಗಣಿತ..
  ಸುಂದರ ಸವಿ ತೋರಣ
  ಅಂತರಂಗದ ಮಾತಿಗೆ...
  ಅನಿಸಿಕೆಗಳೇ ಕಾರಣ..
  ©mamatavikram

 • mamatavikram 7w

  ನಂದಾದೀಪದ ಹೊನ್ನ ಬೆಳಕು
  ಚೆಲ್ಲಿ ಚಿತ್ರಿಸಿದೆ ಸುಂದರ ಚಿತ್ತಾರ
  ನೆನಪುಗಳ ಕಾಮನಬಿಲ್ಲಿಗೆ
  ತುಂಬಿದೆ ಸಾವಿರ ಸಾವಿರ ಬಣ್ಣ
  ಜಗದಗಲ ಮನಸ್ಸಿನ ಕಲ್ಪನೆ
  ತುಂಬಿ ತುಂಬಿ ಪಯಣ..

  ಚೆಲುವ ಚೆನ್ನಿಗನ ಕೊಳಲು
  ಅಲ್ಲಲ್ಲಿ ಧ್ವನಿಸಿ ನಿಸರ್ಗ ಹಸಿರು
  ರಾಧೆಯಾಗಿದೆ ಕನಸು..
  ನರ್ತಿಸಿದೆ ನವಿಲು ನವಿಲುಗರಿ
  ಬೆಡಗು ಬಿನ್ನಾಣ ಸಡಗರದಿ..

  ಕವಿಯಾಗಲು ನಂದಾದೀಪದ ಕಿರಣ
  ಹೊದಿಕೆಯಾಗಿದೆ ಹೂಗಳಿಗೆ
  ಸಮಯದ ಗಡಿಯಾರ.
  ©mamatavikram

 • mamatavikram 7w

  ಮಳೆಹನಿಗಳು.

  ತಂಪು ಗಾಳಿ ಬೀಸಿ
  ಅಂಟಿಕೊಂಡ ಮೋಡ ತಲುಪಿ
  ಹನಿಸಿದೆ ಹನಿಗಳ ಅಲ್ಲಲ್ಲಿ

  ಮರಗಿಡಗಳ ಸ್ಪರ್ಶಿಸಿ ಹರ್ಷದಿಂದ
  ನಿಲ್ಲದೇ ಕ್ರಮಿಸುವ ದಾರಿ ದೂರ ದೂರ
  ಆದರೂ ಅದರ ಕೆಲಸ ಅದರದು
  ಬಿಡುವಿಲ್ಲದ ದುಡಿಮೆಗೆ ಸಹಕಾರ..

  ಬೇಕು ಬೇಡಗಳ ಛದ್ಮವೇಷಗಳ
  ಗೊಂದಲ ಗೊಜಲುಗಳ ಅರಿವಿಲ್ಲದೇ
  ಸರಿತಪ್ಪುಗಳ ಕುಸ್ತಿಯಲ್ಲಿ ..
  ತನ್ನದೇ ಧಾಟಿಯಲ್ಲಿ ಹಾಡುವ
  ಮಳೆಹನಿಗಳಿಗೆ....
  ಫಸಲಿನ ತೂಕ ರೈತರ ದುಃಖ..
  ತಿಳಿದಿಲ್ಲವೆನೋ??

  ಬೀಸು ಗಾಳಿಗೆ...
  ಹಸಿರೆಲೆಗಳ ಜೋಕಾಲಿ...
  ತಟಪಟ ಹನಿಗಳ ಲೀಲೆ...
  ಬರೆಯುತ್ತಿವೆಯೇ.....
  ಹನಿಗಳು..
  ನೆಲದ ಮಣ್ಣಿನಲ್ಲಿ...
  ಭಗವಂತನಿಗೆ.... ಓಲೆ..
  ©mamatavikram

 • mamatavikram 11w

  ಮುಂಜಾನೆ ಪೀಠದಲಿ
  ಹಸಿರು ಚಪ್ಪರದ ಹೊದಿಕೆ
  ತಂಗಾಳಿಯೊಂದು ಬೀಸಿ
  ಮುಂಗುರುಳಿಗೆ ನಗುವಿನ
  ಹಾಸು....

  ತೂಗುತ್ತ ತೊನೆಯುತ್ತ
  ಮಲ್ಲಿಗೆ ಬಳ್ಳಿಯಲಿ
  ನಗುವ ಮೊಗ್ಗೊಂದು
  ಅರಳುವ ಮುದ ಕಂಡು
  ನೆಲದೊಳಗೂರಿದ ..
  ಕನ್ನಡದ ಬೇರಿಗೆ
  ನೆಮ್ಮದಿಯ ಉಸಿರು.
  ©mamatavikram

 • mamatavikram 14w

  ನಭದ ನಕ್ಷತ್ರಗಳು
  ನಗುತ್ತಿವೆ ಹೊಳೆಹೊಳೆದು
  ಮುಡಿದಿವೆ ಪಾರಿಜಾತ
  ಬೆಳದಿಂಗಳನು..

  ಹಾಡುತ್ತಿವೆ ಜೀರುಂಡೆಗಳು
  ಅಲೆ ಅಲೆಯಾಗಿ ಜಿರ್ ಜಿರ್..
  ಜೋಗುಳ....
  ತೂಗುತ್ತಿವೆ ಕಣ್ರೆಪ್ಪೆಗಳು
  ತೊಟ್ಟಿಲಾಗಿ...
  ಶುಭ ಕನಸುಗಳ ಸ್ವಾಗತಿಸುತ್ತಾ....
  ©mamatavikram

 • mamatavikram 34w

  ಕಲ್ಪನೆಯ ಪುಟಗಳಲ್ಲಿ✍

  (ಆಕಾಶ)
  ಹಗಲು ಸ್ವಚ್ಛವಾದ ಬಾನಿನಲ್ಲಿ
  ಬೆಳ್ಳಿ ಮೋಡಗಳ ಅನಾವರಣ
  ರಾತ್ರಿ ತಿಳಿ ನೀಲಿ ಆಗಸದಲ್ಲಿ
  ನಕ್ಷತ್ರಗಳ ಚಂದ್ರಮನಾಗಮನ..

  (ಹಿತ್ತಲು)
  ಚಿಗುರುಗಳ ತೇರಿನಲ್ಲಿ
  ಮೃದುವಾದ ಮಂದಹಾಸ
  ಹದವಾಗಿ ಬೆರೆಸಿದ ಮಣ್ಣು
  ಸ್ವಪ್ರಯತ್ನದ ಹೆಮ್ಮೆಯ ಕಣ್ಣು

  (ಯಕ್ಷಗಾನ)
  ತಾಳಮೇಳ ಸಂಗೀತದಲ್ಲಿ
  ಸುಲಲಿತ ಗೆಜ್ಜೆ ಗಾನ...
  ಹಾವಭಾವ ಸರಿಗಮದಲ್ಲಿ
  ಮಧುರ ಹೆಜ್ಜೆಗಳ ತನನ...

  (ಅಕ್ಷರ)
  ಬೆರೆತು ಬೆರೆಸಿ ಹರಿಸಿ
  ನುರಿತ ನವೀನ ಭಾವ
  ಕಿರಣಗಳ ತೋರಣ..
  ಕವಿಯ ಕಲ್ಪನೆಯ ವರ್ಣ
  ತುಂಬಿದೆ ಲೇಖನಿಗೆ...
  ಕಾಮನಬಿಲ್ಲು ನೈಸರ್ಗಿಕ ಬಣ್ಣ.
  ©mamatavikram